ಹುಬ್ಬಳ್ಳಿ. ಧಾರವಾಡ :ಬ್ಯುಸಿನೆಸ್ ಮಾಡಲು ಹೋಗಿ ಕೈ ಸುಟ್ಟುಕೊಂಡ ಮಹಿಳೆಯರು ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಲೇ ಇದೆ. ಹಣ ಹೂಡಿಕೆ ಮಾಡುವ ಮೂಲಕ ದುಪ್ಪಟ್ಟು ಲಾಭ ಪಡೆಯಲು ಹೋಗಿ ಜನರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಅಂತಹುದೇ ಪ್ರಕರಣವೊಂದು ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರ ನಿದ್ದೆಗೆಡಿಸಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..
ಹೀಗೆ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಈ ಮಹಿಳೆಯರು ಗಿರಿಜಾ ಹಿರೇಮಠ ಹಾಗೂ ವಿಜೇತಾ. ಆಯುರ್ ಕ್ಯೂರ್ ಹೆಲ್ತ್ ಆ್ಯಂಡ್ ರಿಟೇಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 16,11,982 ಹಾಗೂ 2,00,000 ರೂಪಾಯಿ ಬ್ಯಾಂಕ್ ಮೂಲಕ ವರ್ಗಾವಣೆ ಮಾಡುವ ಮೂಲಕ ವಂಚನೆಗೆ ಒಳಗಾಗಿದ್ದಾರೆ. ಅಲ್ಲದೇ ಈ ಸ್ಟೋರ್ ಹೆಸರಿನಲ್ಲಿ ಚೈನ್ ಸಿಸ್ಟಮ್ ಆಸೆಗೆ ಬಹಳಷ್ಟು ಜನರು ಹಣವನ್ನು ಕಳೆದುಕೊಂಡಿದ್ದಾರೆ. ಬಣ್ಣ ಬಣ್ಣದ ಮಾತುಗಳಿಗೆ ಹಾಗೂ ಗ್ರಾಸರಿ ಪ್ರೋಡೆಕ್ಟಗೆ 33% ರಿಯಾಯಿತಿ ಆಸೆಗೆ ಬಿದ್ದು, ಒಬ್ಬ ಮಹಿಳೆ 17 ಲಕ್ಷ ಮತ್ತೊಬ್ಬರು 2 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು, ಈಗ ನ್ಯಾಯಕ್ಕಾಗಿ ಪೋಲಿಸ್ ಠಾಣೆ ಮೆಟ್ಟಿಲೇರಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಹುಬ್ಬಳ್ಳಿಯ ನಾಲ್ಕೈದು ಕಡೆಗಳಲ್ಲಿ E-STORE ಹೆಸರಲ್ಲಿ ಮಳಿಗೆಗಳನ್ನು ತೆರೆದಿದ್ದು, ಸಾಕಷ್ಟು ಹಣವನ್ನು ಹೂಡಿಕೆ ಮಾಡಿಕೊಂಡು ಕಾಲು ಕಿತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ದೊಡ್ಡ ದೊಡ್ಡ ಹೊಟೇಲಗಳಲ್ಲಿ ಹಾಗೂ ಆಯಕಟ್ಟಿನ ಜಾಗೆಯಲ್ಲಿ ಬಾಡಿಗೆ ಪಡೆದು ಹಣ ಹೊಡೆದುಕೊಂಡು ಈಗ ಅಂಗಡಿ ಖಾಲಿ ಮಾಡಿಕೊಂಡು ಮೋಸ ಮಾಡಿರುವುದಾಗಿ ವಂಚನೆಗೆ ಒಳಗಾದ ಮಹಿಳೆಯರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸಾವಿರಾರು ಜನರು ವಂಚನೆಗೆ ಒಳಗಾದ ಬಗ್ಗೆ ಮಹಿಳೆಯರು ಮಾಹಿತಿ ನೀಡಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.