ವರದಿ:ಸಚಿನ ಕಾಂಬ್ಳೆ ಕಾಗವಾಡ
ಕಾಗವಾಡ: ಜಾರ್ಖಂಡ ರಾಜ್ಯದಲ್ಲಿರುವ ಜೈನ ಧರ್ಮಿಯರ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರಜಿಯನ್ನು ಅಲ್ಲಿಯ ಸರಕಾರ ಪ್ರವಾಸಿ ತಾಣವೆಂದು ಮಾರ್ಪಾಡು ಮಾಡುತ್ತಿರುವುದನ್ನು ಖಂಡಿಸಿ ಕಾಗವಾಡ ತಾಲೂಕಿನ ಜೈನ ಸಮುದಾಯದ ವತಿಯಿಂದ ಕಾಗವಾಡದಲ್ಲಿ ಬೃಹತ್ ಪ್ರತಿಭಟನೆ ರ‍್ಯಾಲಿ ಜರುಗಿತು.
ಬುಧವಾರ ದಿ. ೨೧ ರಂದು ಕಾಗವಾಡ ಪಟ್ಟಣದ ವಿದ್ಯಾಸಾಗರ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ತಾಲೂಕಿನ ಜೈನ ಸಮುದಾಯದವರು ಒಂದುಗೂಡಿ ಶಿಖರಜಿ ಬಚಾವೋ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ನಾಂದಣಿ ಜೈನ ಮಠದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಜಾರ್ಖಂಡ ಸರಕಾರ ತನ್ನ ಆದೇಶವನ್ನು ಹಿಂಪಡೆದು ಅದೊಂದು ಪವಿತ್ರ ತೀರ್ಥಕ್ಷೇತ್ರವೆಂದು ಸಂರಕ್ಷಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ ಮೂಲಕ ಪ್ರಧಾನಿಗಳಿಗೆ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸ್ವಾಮಿಜಿ ಮಾತನಾಡುತ್ತಾ, ಈ ಕ್ಷೇತ್ರದಲ್ಲಿ ೨೪ ತೀರ್ಥಂಕರರ ಪೈಕಿ ೨೦ ತೀರ್ಥಂಕರರು ಮೋಕ್ಷವಾದ ಕ್ಷೇತ್ರವಾಗಿದೆ.ಅಲ್ಲದೆ ಸುಮಾರು ೨೦ ಕೋಟಿಗೂ ಹೆಚ್ಚು ಮುನಿಗಳು ಮೋಕ್ಷಕ್ಕೆ ಹೋದ ಕ್ಷೇತ್ರವಾಗಿದೆ. ಇದನ್ನು ಪ್ರವಾಸಿ ತಾಣ ಮಾಡಬಾರದು ಎಂದು ಒಕ್ಕೋರಲಿನಿಂದ ಜೈನ ಸಮಾಜದ ಸಾವಿರಾರು ಶ್ರಾವಕ, ಶ್ರಾವಕಿಯರು, ಮುಖಂಡರು ಆಗ್ರಹಿಸಿದರು.
ಜಾರ್ಖಂಡ ಸರಕಾರದ ವಿನಂತಿಯ ಮೇರೆಗೆ ಕೇಂದ್ರ ಸರಕಾರವೂ ಸಹ ಒಂದು ಆದೇಶ ಹೊರಡಿಸಿ ಇದೊಂದು ಪ್ರವಾಸಿ ಕ್ಷೇತ್ರ ಮಾಡಲು ಮುಂದಾಗಿರುವುದು ಖಂಡನೀಯ. ಜೈನ ಸಮಾಜ ಯಾವಾಗಲು ಅಹಿಂಸೆ ಮಾರ್ಗದಲ್ಲಿ ನಡೆಯುವ ಸಮಾಜವಾಗಿದೆ. ಈ ಸಮಾಜದ ತೀರ್ಥಕ್ಷೇತ್ರಗಳು ಕೈತಪ್ಪಿ ಅನ್ಯರ ಪಾಲಾಗುತ್ತಿವೆ. ಒಂದು ವೇಳೆ ಪ್ರವಾಸಿ ತಾಣವಾದರೆ ಅಲ್ಲಿ ಮದ್ಯ, ಮಾಂಸ ಸೇವನೆ ಮತ್ತು ಇನ್ನಿತರ ಅನೈತಿಕ ಚಟುವಟಿಕೆಗಳು ನಡೆದು ತೀರ್ಥಕ್ಷೇತ್ರದ ಪಾವಿತ್ರ್ಯತೆ ಹಾಳಾಗಲಿದೆ. ಹಾಗಾಗಿ ಜಾರ್ಖಂಡ ಸರಕಾರ ಮತ್ತು ಕೇಂದ್ರ ಸರಕಾರ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣ ಮಾಡುವ ಯೋಜನೆಯನ್ನು ಕೈಬಿಟ್ಟು ತೀರ್ಥ ಕ್ಷೇತ್ರದ ಪಾವಿತ್ಯತೆ ಕಾಪಾಡಬೇಕೆಂದು ಆಗ್ರಹಿಸಿ ಕಾಗವಾಡ ತಹಸೀಲ್ದಾರ ಮೂಲಕ ಪ್ರಧಾನಮಂತ್ರಿಗಳಿಗೆ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಜೈನ ಮುಖಂಡರುಗಳಾದ ಶೀತಲಗೌಡ ಪಾಟೀಲ, ಸಂಜಯ ಕುಚನೂರೆ, ಅಭಯ ಅಕಿವಾಟೆ, ಸುರೇಶ ಚೌಗಲೆ, ಟಿ.ಕೆ.ಧೋತರೆ ಮೊದಲಾದ ಮುಖಂಡರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಜಾರ್ಖಂಡ ರಾಜ್ಯದಲ್ಲಿರುವ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರಜಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಅಲ್ಲಿ ಆಕ್ರಮ ಮತ್ತು ಅನೈತಿಕ ಚಟುವಟಿಕೆಗಳು ಪ್ರಾರಂಭಗೊಂಡು ತೀರ್ಥಕ್ಷೇತ್ರದ ಪಾವಿತ್ರತೆ ಹಾಳಾಗಲಿದೆ.ಈ ಕ್ಷೇತ್ರ ಸಂಪೂರ್ಣ ಜೈನ ಸಮುದಾಯದ ಏಕೈಕ ಹಾಗೂ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಇದನ್ನು ಪ್ರವಾಸಿ ತಾಣ ಮಾಡಬಾರದು ಎಂದು ಒತ್ತಾಯಿಸಿದರು. ಬುಧವಾರ ಬೆಳಿಗ್ಗೆ ೧೦ ಗಂಟೆಗೆ ವಿದ್ಯಾಸಾಗರ ಶಾಲೆ ಆವರಣದಿಂದ ಪ್ರಾರಂಭವಾದ ಪ್ರತಿಭಟನಾ ರ‍್ಯಾಲಿಯೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರ‍್ಯಾಲಿಯಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಆಗಮಿಸಿ ಶಕ್ತಿ ಪ್ರದರ್ಶನ ಪ್ರದರ್ಶಿಸುವದರೊಂದಿಗೆ ರ‍್ಯಾಲಿಯನ್ನು ಯಶಸ್ವಿಗೊಳಿಸಿದರು. ರ‍್ಯಾಲಿಯುದ್ದಕ್ಕೂ ಸಮ್ಮೇದ ಶಿಖರಜಿ ಬಚಾವೋ ಎಂಬ ಘೋಷ ವಾಕ್ಯಗಳು ಮೋಳಗಿದವು. ತಾಲೂಕಿನ ಎಲ್ಲ ಜೈನ ಸಮುದಾಯವು ಬುಧವಾರ ದಿನದಂದು ತಮ್ಮ ಅಂಗಡಿ ಮುಗ್ಗಟ್ಟು, ವ್ಯಾಪಾರ ವಹಿವಾಟುಗಳನ್ನು ಬಂದು ಮಾಡಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು. ಈ ಸಮಯದಲ್ಲಿ ಶೀತಲಗೌಡಾ ಪಾಟೀಲ, ಸಂಜಯ ಕುಚನೂರೆ, ಅಭಯಕುಮಾರ ಅಕಿವಾಟೆ, ವಿಜಯಕುಮಾರ ಅಲಿವಾಟೆ, ಟಿ.ಕೆ.ಧೋತರೆ, ಸುರೇಶ ಚೌಗಲೆ, ಯಶವಂತ ಪಾಟೀಲ, ಆಧಿನಾಥ ದಾನೊಳ್ಳಿ, ಬಾಹುಬಲಿ ಕುಸನಾಳೆ, ವಿಪುಲ ಪಾಟೀಲ, ಅಪ್ಪಾಸಾಬ ಚೌಗುಲಾ, ವಜ್ರಕುಮಾರ ಮಗದುಮ್, ರಾಹುಲ ಶಹಾ, ಅರುಣ ಗಣೇಶವಾಡಿ, ಎ.ಬಿ.ಪಾಟೀಲ, ಅಜೀತ ಚೌಗಲೆ, ಅಣ್ಣಾಗೌಡ ಪಾಟೀಲ, ಮಹಾವೀರ ಕಾತ್ರಾಳೆ, ಪದ್ಮಕುಮಾರ ಆಳಪ್ಪನವರ, ವಿದ್ಯಾಸಾಗರ ಮಾಲಗಾಂವೆ, ಪದ್ಮಾಕರ ಕರವ, ಪ್ರದೀಪ ಚಿಂಚವಾಡೆ, ಜಯಪಾಲ ಯರಂಡೋಲಿ, ಸಂದೀಪ ಮಗದುಮ, ವಿದ್ಯಾಧರ ಚೌಗಲೆ, ವಿಜಯ ಚೌಗಲೆ, ವಿಜಯ ಕರೋಲೆ, ರಾಜು ಗೋಬಾಜೆ, ಅಪ್ಪಿ ಚೌಗಲೆ, ರಾಮಚಂದ್ರ ಕಿಲ್ಲೇದಾರ, ಭೀಮು ಭೋಲೆ, ಪ್ರವೀಣ ಚೌಗುಲೆ, ಕುಮಾರ ಮಾಲಗಾಂವೆ, ಪ್ರಕಾಶ ಎಂದಗೌಡರ, ಭೀಮು ಅಕಿವಾಟೆ, ರಾಜೇಂದ್ರ ಚೌಗುಲೆ, ಪ್ರಕಾಶ ಹೆಮಗೀರೆ, ಸೇರಿದಂತೆ ಕಾಗವಾಡ, ತಾಲೂಕಿನ ಪ್ರತಿ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜೈನ ಶ್ರಾವಕ-ಶ್ರಾವಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.