ಹಾರೂಗೇರಿ : ಇವರು ಹಾರೂಗೇರಿ ಪಟ್ಟಣದ ವಿವೇಕಾನಂದ ನಗರದಲ್ಲಿ ವಾಸವಿರುವ ಸದ್ಯ ತೇರದಾಳದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವಿಕಲಚೇತನ ಪ್ರತಿಭಾವಂತ ಶಿಕ್ಷಕ. ಸಾಧನೆ ಅನ್ನೋದು ಎಲೆ ಮರೆಯ ಕಾಯಿಯಂತೆ ಎಲ್ಲೋ ಅಡಗಿ ಕುಳಿತಿರುತ್ತೆ ಅದನ್ನ ಅರಿತು ಪರಿಚಯಿಸುವ ಕಾರ್ಯ ನಮ್ಮದಾಗಬೇಕು. ಅಂದಹಾಗೆ ಏನು ಈ ವಿಕಲಚೇತನ ಶಿಕ್ಷಕರ ಕಾರ್ಯಸಾಧನೆ ಎಂದು ಕೇಳಿದರೆ…. ಇವರು 1989 ರಿಂದ ಪ್ರತಿ ವರ್ಷ ತಮ್ಮ ಸ್ವಂತ ಖರ್ಚಿನಿಂದ ಅಂಚೆ ಪತ್ರಗಳನ್ನು ಬರೆಯುತ್ತಾರೆ.ಮೊದ ಮೊದಲು ಹದಿನೈದು ಪೈಸೆ ಪತ್ರದ ದರವಿದ್ದಾಗ ತಮ್ಮ ಗೆಳೆಯರ ಗುಂಪುಗಳಿಗೆ 100 ಪತ್ರಗಳನ್ನು ಬರೆಯಲು ಪ್ರಾರಂಭಿಸಿ ಇದೀಗ 2000 ಸಾವಿರ ಪತ್ರಗಳನ್ನು ಬರೆಯುವ ಹಾಗೂ ಅವುಗಳನ್ನು ಸರಿಯಾದ ವಿಳಾಸಕ್ಕೆ ಕಳುಹಿಸುವ ಪಕ್ಕಾ ಮಾದರಿ ಕಾಯಕಕ್ಕೆ ನಾಂದಿ ಹಾಡಿದ್ದಾರೆ. ಪ್ರತಿ ವರ್ಷ ಹೊಸ ವರ್ಷದ ಶುಭಾಶಯಗಳನ್ನು ಎಲ್ಲರಿಗೂ ತಿಳಿಸಬೇಕೆಂಬ ಹಂಬಲದಿಂದ ಎಲ್ಲರಿಗೂ ಹೊಸ ವರ್ಷದ ಹಾಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನ ಅಂಚೆ ಇಲಾಖೆಯ ಕಾರ್ಡ್ ಗಳಲ್ಲಿ ಬರೆದು ಕಳುಹಿಸಿ ಡಿಜಿಟಲ್ ಯುಗವಾದ ಇಂದಿನ ಕಾಲದಲ್ಲಿ ಅಂಚೆ ಕಾರ್ಡ್ ಮಾರಾಟ ಹಾಗೂ ಪತ್ರ ಬರವಣಿಗೆಯ ಪದ್ಧತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವಲ್ಲಿ ವಿಶೇಷ ಪಾತ್ರವಹಿಸಿದ್ದಾರೆ. ನಿಜಕ್ಕೂ ಇವರ ಈ ಪತ್ರ ಕಾರ್ಯ ಶ್ಲಾಘನೀಯವಾದದ್ದು. ಇವರ ಇನ್ನೊಂದು ಮಾತೆಂದರೆ ನಾನು ಇರೋವರೆಗೂ ಈ ಪತ್ರ ಬರೆಯುವ ಪದ್ಧತಿ ನಿಲ್ಲಿಸುವುದಿಲ್ಲ ಹಾಗೂ ಇದೀಗ ಕರ್ನಾಟಕದ 31 ಜಿಲ್ಲೆಗಳಿಗೂ ಸಂಪರ್ಕವಿರುವ ಎಲ್ಲಾ ಜನತೆಗೆ ಕಳುಹಿಸಿರುವೆ ಇನ್ಮುಂದೆ ಇಡೀ ನಮ್ಮ ದೇಶದ ಎಲ್ಲಾ ರಾಜ್ಯಗಳಿಗೂ ಹಾಗೂ ಮುಂದೆ ಇಡೀ ವಿಶ್ವದ ಎಲ್ಲಾ ರಾಷ್ಟ್ರದ ಮುಖ್ಯಸ್ಥರಿಗೂ ಪತ್ರ ಬರೆದು ಶುಭಾಶಯ ಕೋರಿ ನಮ್ಮ ದೇಶದ ಕಾಳಿದಾಸನ ಮೇಘಸಂದೇಶ, ಪಾರಿವಾಳದ ಪತ್ರ ಸಂದೇಶ ಇದ್ದಂತೆ ಅಂಚೆ ಕಛೇರಿಯ ಹೆಮ್ಮೆಯ ಈ ಪತ್ರಗಳನ್ನು ಪರಿಚಯಿಸುವ ಹಾಗೂ ಒಬ್ಬರಿಗೊಬ್ಬರು ಭಾಂದವ್ಯ ಬೆಸೆಯುವ ಕಾಯಕಕ್ಕೆ ಮುನ್ನುಡಿ ಹಾಡುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಬಸವರಾಜ ಬಾಡಗಿ. ಇವರ ಈ ಪತ್ರ ಕಾಯಕದ ಸಮತಾ ಭಾವಕ್ಕೆ ನಮ್ಮದೊಂದು ಸಲಾಂ.
*ವರದಿ : ಸುನೀಲ್ ಕಬ್ಬೂರ ಹಾರೂಗೇರಿ 9740551001