ವರದಿ:ಸಚಿನ ಕಾಂಬ್ಳೆ.
ಕಾಗವಾಡ :ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಹಾಪೂರ ಗ್ರಾಮದ ನೆರೆ ಸಂತ್ರಸ್ತರಿಗೆ ಮನೆಗಳನ್ನು ಮಂಜೂರು ಗೊಳಿಸುವಂತೆ ಒತ್ತಾಯಿಸಿ, ಕಾಗವಾಡ ತಹಶೀಲ್ದಾರ ಕಾರ್ಯಾಲಯದ ಮುಂದೆ ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಶಹಾಪೂರ ಗ್ರಾಮಸ್ಥರು ಸೋಮವಾರ ದಿ. ೧೯ ರಂದು ಕಾಗವಾಡ ಪಟ್ಟಣದ ಚೆನ್ನಮ್ಮ ಸರ್ಕಲ್‌ದಲ್ಲಿ ಒಂದುಗೂಡಿ ರ‍್ಯಾಲಿ ಮುಖಾಂತರ ತಹಶೀಲ್ದಾರ ಕಾರ್ಯಾಲಯಕ್ಕೆ ತಲುಪಿ, ಅಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು. ಸತ್ಯಾಗ್ರಹಕ್ಕೆ ಮುಂಚೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧಿಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
ಈ ವೇಳೆ ಸತ್ಯಾಗ್ರಹ ನಿರತ ಮುಖಂಡರು ಮಾತನಾಡಿ ೨೦೧೯ ರಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿನ ಸರ್ಕಾರ ಬಿಡುಗಡೆ ಮಾಡಿದ ಮನೆಗಳ ಅಧಿಕೃತ ಪಟ್ಟಿಯನ್ನೇ ಅನುಮೋದನೆ ನೀಡಬೇಕು ಹಾಗೂ ೨೦೨೧ ರ ಪ್ರವಾಹದಿಂದ ಹಾನಿಯಾದ ಮನೆಗಳನ್ನು ಪಾರದರ್ಶಕತೆಯಿಂದ ಮಂಜೂರಾತಿ ಗೊಳಿಸುವಂತೆ ಒತ್ತಾಯಿಸಿ ಈ ಆಮರಣ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗಿದೆ. ಎಲ್ಲಿಯವರೆಗೆ ನಮ್ಮ ಬೇಡಿಕೆಗಳು ಈಡೇರುವುದಿಲ್ಲಯೋ ಅಲ್ಲಿಯವರೆಗೆ ಈ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಹೇಳಿದರು.
ಜುಗೂಳ ಗ್ರಾಮ ಪಂಚಾಯತ ಸದಸ್ಯ ಉಮೇಶ ಪಾಟೀಲ ಮಾತನಾಡಿ ೩ ವರ್ಷಗಳ ಹಿಂದೆ ಪ್ರವಾಹ ಬಂದು ೯೨ ಕುಟುಂಬಗಳ ಮನೆ ಹಾನಿಯಾಗಿದ್ದು, ಇಲ್ಲಿಯ ವರೆಗೆ ಮನೆಗಳಿಗೆ ಮಂಜೂರಾತಿ ನೀಡಿರುವುದಿಲ್ಲ. ಈ ಕುರಿತು ಹಲವಾರು ಸಲ ಪ್ರತಿಭಟನೆ ಮಾಡಿದರೂ ಕೂಡ ಪರಿಹಾರ ದೊರೆಯದೇ ಇರುವುದರಿಂದ ಇಂದಿನಿAದ ಗ್ರಾಮಸ್ಥರು ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸರ್ಕಾರ ಕೂಡಲೇ ಇವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಮಾದಗೌಡ ಪಾಟೀಲ, ವಿಜಯ ನಾಯಿಕ, ಬಾಬಾಸಾಬ ಹುನ್ನರಗೆ, ದೀಪಕ ಪಾಟೀಲ, ಬಬನ ಕಮತೆ, ಸದಾಶಿವ ಕಾಂಬಳೆ, ಬಾಬು ಕಾಂಬಳೆ, ನಾನಾ ಜಾಧವ, ಶಿವಾನಂದ ಪಾಟೀಲ, ಮಹೇಶ ಪಾಟೀಲ, ಸುಮನ ಸ್ವಾಮಿ, ಶಾಂತಾ ಸ್ವಾಮಿ, ಶೋಭಾ ಕಾಂಬಳೆ, ನೀಲಾ ಕಾಳೆ, ನರ್ಮದಾ ಕಾಂಬಳೆ, ಸುಮನ ಕಾಂಬಳೆ ಸೇರಿದಂತೆ ಗ್ರಾಮಸ್ಥರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.