raju toppannavar/ cm/karnataka/

ಸಿಎಂ ಬೆಳಗಾವಿ ನಗರಕ್ಕೆ ಬರುತ್ತಿರುವುದು 40% ಭ್ರಷ್ಟಾಚಾರದ ಸಾಧನೆ ಹೇಳಲು: ಟೋಪಣ್ಣವರ ಆರೋಪ

Share the Post Now

ಬೆಳಗಾವಿ: ನಗರದಲ್ಲಿ ಪ್ರಚಾರ ನಡೆಸಲು ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿಯ ಬಗ್ಗೆ ಮಾತನಾಡಲು ಬರುತ್ತಿಲ್ಲ. ಬದಲಾಗಿ ತಮ್ಮ ಪಕ್ಷದಲ್ಲಿನ 40% ಭ್ರಷ್ಟಾಚಾರದ ಸಾಧನೆಯ ಬಗ್ಗೆ ಮಾತನಾಡಲು ಬರುತ್ತಿದ್ದಾರೆ ಎಂದು ಆಮ್ ಆದ್ಮಿ ಉತ್ತರ ಮತಕ್ಷೇತ್ರದ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಆರೋಪಿಸಿದರು.

ಮಂಗಳವಾರ ಅಜಂನಗರ, ಶಾಹುನಗರ ಕಡೆಗಳಲ್ಲಿ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಬೆಳಗಾವಿಗೆ ಬಂದಾಗ ಸ್ಮಾರ್ಟ್ಸಿಟಿ ಯೋಜನೆಯ ಒಂದು ಕಾಮಗಾರಿಯನ್ನು ಉದ್ಘಾಟನೆ ಮಾಡಿಸಲಿಲ್ಲ. ಬ್ರಿಟಿಷ್ ಕಾಲದ ರೈಲ್ವೆ ನಿಲ್ದಾಣದ ಉನ್ನತಿಕರಣಗೊಳಿಸಿರುವುದನ್ನು ಉದ್ಘಾಟನೆ ಮಾಡಿಸಿದ್ದು ನಾಚಿಗೇಡಿತನದ ಸಂಗತಿ ಎಂದರು.

ಬೆಳಗಾವಿಗೆ ಬರುವ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿ-ಧಾರವಾಡಕ್ಕೆ ತೆಗೆದುಕೊಂಡು ಹೋದರು. ಆದರೆ ಬೆಳಗಾವಿಯ ಬುಡಾದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಅವರು ಮಾತನಾಡುವುದಿಲ್ಲ. ಅವರ ಪಕ್ಷ ನಡೆಸಿದ 40% ಕಮಿಷನ್ ಸಾಧನೆಯ ಬಗ್ಗೆ ಮಾತನಾಡಲು ಬರುತ್ತಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದರು.
ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಹೊಸದ್ದು, ಇತ್ತೀಚೆಗೆ ನಮ್ಮ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನ ಮಾನ ಸಿಕ್ಕಿದೆ. ಬೆಳಗಾವಿ ಉತ್ತರ ಮತಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಕ್ಷೇತ್ರದ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.

ಎಲ್ಲ ಸಮುದಾಯದ ಹಿರಿಯ ನಾಗರಿಕರು, ಮಹಿಳೆಯರು ನನಗೆ ಬೆಂಬಲ ನೀಡುತ್ತಿದ್ದಾರೆ. ಮನೆ, ಮನೆಗೆ ಹೋಗಿ ಪ್ರಚಾರವೂ ನಡೆಸುತ್ತಿದ್ದೇವೆ. ನಮ್ಮ ಉದ್ದೇಶ ಮೈಕ್ರೋ ಲೇವಲ್ ನಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿರುವ ಸಮಸ್ಯೆ, ಅದಕ್ಕೆ ಪರಿಹಾರ ಏನು, ನಾವು ಮಾಡುವ ಕೆಲಸ, ನಮ್ಮ ಉದ್ದೇಶವೇನು ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ನಮ್ಮ ಉದ್ದೇಶ ನೋಡಿಕೊಂಡು ಜನರು ಬೆಂಬಲ ನೀಡುತ್ತಿದ್ದಾರೆ ಎಂದರು.

ಬೆಳಗಾವಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಆಮ್ ಆದ್ಮಿ ಪಕ್ಷದಿಂದ ನಗರದಲ್ಲಿ ಬಿಜೆಪಿಯಿಂದ ನಡೆಯುತ್ತಿರುವ ದಬ್ಬಾಳಿಕೆ, ಭ್ರಷ್ಟಾಚಾರ, ಸುಳ್ಳು ಮಾತುಗಳು, ಭೂ ಹಗರಣದ ಬಗ್ಗೆ ಜನರ ಮುಂದೆ ಇಟ್ಟಿದ್ದೇವೆ. ಬೆಳಗಾವಿಯ ಉತ್ತರ ಮತಕ್ಷೇತ್ರದ ಜನ ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಬೇಕಿದೆ. ಕಳೆದ ಐದು ವರ್ಷದಿಂದ ಸ್ಥಳೀಯ ಸಮಸ್ಯೆಯ ಬಗ್ಗೆ ಒಂದು ಹೋರಾಟ ಮಾಡಲಿಲ್ಲ. ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ, ಬುಡಾದಲ್ಲಿನ ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡಲಿಲ್ಲ. ಕೇವಲ ಕೆಲ ಕಡೆಗಳಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮಾತ್ರ ಧ್ವನಿ ಎತ್ತಿದ್ದಾರೆ. ಆದರೆ ಸ್ಥಳೀಯ ಕಾಂಗ್ರೆಸ್ ನಾಯಕರು ಧ್ವನಿ ಎತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ. ಕಳಪೆ ಕಾಮಗಾರಿಯಾಗಿವೆ. ಬೆಳಗಾವಿ ಸಮಗ್ರ ಅಭಿವೃದ್ಧಿ ಪಡಿಸುವುದು ಆಮ್ ಆದ್ಮಿ ಪಕ್ಷದ ಗುರಿಯಾಗಿದೆ. ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

Leave a Comment

Your email address will not be published. Required fields are marked *

error: Content is protected !!