ಬೆಳಗಾವಿ.ರಾಯಬಾಗ:ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪಠ್ಯದ ಜೊತೆಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಪಠ್ಯೇತರ ಚಟುವಟಿಕೆಗಳು ಕಲಿಕೆಗೆ ಪ್ರೇರಕವಾಗುತ್ತವೆ ಎಂದು ಕೆ.ಎಲ್.ಇ. ಸಂಸ್ಥೆಯ ಶಿರಗುಪ್ಪಿಯ ಪದವಿಪೂರ್ವ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕರಾದ ಪ್ರೊ.ಕೆ.ಎ.ಮಾಳಿ ಅಭಿಮತ ವ್ಯಕ್ತಪಡಿಸಿದರು.
ಅವರು ದಿನಾಂಕ 8 ರಂದು ಮಂಗಳವಾರ ನೆರೆಯ ಕಾಗವಾಡ ತಾಲ್ಲೂಕು ಕೆ.ಎಲ್.ಇ. ಸಂಸ್ಥೆಯ ಶಿರಗುಪ್ಪಿಯ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ “ಕಲಾವೈಭವ 2023” ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ನಮ್ಮ ಭಾರತೀಯ ಸಂಸ್ಕೃತಿಯು ವಿಭಿನ್ನವಾದ ವಿಶಿಷ್ಟವಾದ ಶ್ರೀಮಂತಿಕೆಯಿಂದ ಕೂಡಿದೆ.ವೈವಿದ್ಯತೆಯಲ್ಲಿ ಐಕ್ಯತೆಯನ್ನು ಹೊಂದಿರುವ ಈ ಭವ್ಯ ರಾಷ್ಟ್ರದಲ್ಲಿ ನಾಗರಿಕರ ಆಚಾರ,ವಿಚಾರ ವೇಷ ಭೂಷಣ ಭಿನ್ನ ಭಿನ್ನವಾದರೂ ದ್ವೇಷಕ್ಕಿಂತ ನಮಗೆ ದೇಶ ಶ್ರೇಷ್ಠ ಎಂಬ ಭಾವ ಪ್ರತಿಯೊಬ್ಬರಲ್ಲಿ ಅಂಕುರಿಸಬೇಕು. ಸರ್ವಧರ್ಮ ಸಮನ್ವಯದ ಈ ನೆಲದ ಮಹತ್ವ ಅರಿಯಬೇಕು ಎಂಬ ಸದುದ್ದೇಶದಿಂದ ನಮ್ಮ ಈ ಮಹಾವಿದ್ಯಾಲಯದಲ್ಲಿ ವೈವಿಧ್ಯಮಯವಾದ ವಿಶೇಷ ಮನರಂಜಿಸುವ ರಚನಾತ್ಮಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಕಲಿಕೆಯನ್ನು ಸುಗಮಗೊಳಿಸುತ್ತವೆ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಇದ್ದಂತೆ ಎಂದು ಮಾರ್ಮಿಕವಾಗಿ ನುಡಿದರು. ಇದಕ್ಕೂ ಮೊದಲು ಆಗಮಿಸಿದ ಗಣ್ಯರು ಸಸಿಗೆ ನೀರುಣಿಸುವ ಮೂಲಕ 5 ದಿನಗಳ ವರೆಗೆ ನಡೆಯುವ “ಕಲಾವೈಭವ 2023” ಕ್ಕೆ ಚಾಲನೆ ನೀಡಿದರು.
ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ ಎಸ್.ಬಿ.ಪಾಟೀಲ ಅವರು ಮಾತನಾಡಿ ” ವಿದ್ಯಾರ್ಥಿಗಳಿಗೆ ತಮ್ಮ ಪಠ್ಯದ ಜೊತೆಗೆ ಲಲಿತ ಕಲೆ ಹಾಗೂ ಸಾಹಿತ್ಯದ ಅಭಿರುಚಿಯನ್ನು ಮೂಡಿಸಲು ನಮ್ಮ ಕಾಲೇಜಿನಲ್ಲಿ ಕಲಾ ವೈಭವ ಎಂಬ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ವೈವಿಧ್ಯಮಯ ಕಲಾವೈಭವದಲ್ಲಿ ತಾವು ತಮ್ಮಲ್ಲಿ ಅಂತರ್ಗತವಾದ ಪ್ರತಿಭೆಯನ್ನು ಚೆನ್ನಾಗಿ ಅನಾವರಣಗೊಳಿಸಬೇಕು ಎಂದು ನುಡಿದರು. ವಾಣಿಜ್ಯ ವಿಭಾಗದ ಸಂಯೋಜಕರು,ಪ್ರಾಧ್ಯಾಪಕರು ಹಾಗೂ ಯುವ ಕವಿಗಳಾದ ಪ್ರೊ ಎಲ್.ಎಸ್.ವಂಟಮೂರೆ ಅವರು ಉಪಸ್ಥಿತರಾಗಿ ಪಾಲ್ಗೊಂಡು “ಪ್ರಸ್ತುತ ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡ ಈ ಕಲಾ ವೈಭವ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ.ಭವಿಷ್ಯದಲ್ಲಿ ತಾವೆಲ್ಲರೂ ಕಲಾ ಆರಾಧಕರಾಗಿ ಅಭಿಜಾತ ಕಲಾವಿದರಾಗಿ ಹೊರಹೊಮ್ಮಬೇಕೆಂದು ತಮ್ಮ ಪ್ರಸ್ತಾವಿಕ ಆಶಯ ನುಡಿಗಳ ಮೂಲಕ ಸೊಗಸಾಗಿ ಹಂಚಿಕೊಂಡರು.”ಕಲಾವೈಭವ” ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಹಾಗೂ ಮಿಸ್ ಮ್ಯಾಚ್ ಸ್ಪರ್ಧೆಗಳಲ್ಲಿ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅಪೂರ್ವ ಪ್ರತಿಭೆಯನ್ನು ಪ್ರದರ್ಶಿಸಿದರು. ಕನ್ನಡ ಪ್ರಾಧ್ಯಾಪಕರಾದ ಡಾ.ಜಯವೀರ ಎ.ಕೆ. ಶ್ರೀಮತಿ ಪ್ರೊ. ರಾಧಿಕಾ ಯಾದವ, ಪ್ರೊ.ಬಿ.ಆರ್.ನರವಾಡೆ, ಪ್ರೊ.ಎ.ಎಸ್.ಶಿರಗುಪ್ಪೆ
ಪ್ರೊ.ಕು.ಸಿ.ಎಸ್.ಸುತಾರ, ಹಾಗೂ ಪ್ರೊ.ರಾಹುಲ್ ಮಾಂಜರೆ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕು.ನಂದಿನಿ ಅಂಬಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕು. ಪಲ್ಲವಿ ಕಟ್ಟಿ ಸ್ವಾಗತಿಸಿದರು. ಕು.ನಪೀಸಾ ಅರಬ ನಿರೂಪಿಸಿದರು. ಕೊನೆಗೆ ಅಮೃತಾ ಭಗತ ವಂದಿಸಿದರು.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*





